ಕಾನ್ಸಲ್

ರೋಮನ್ ಪ್ರಜಾಪ್ರಭುತ್ವದಲ್ಲಿ ವರ್ಷೇ ವರ್ಷೇ ಚುನಾಯಿತನಾಗಿ ಪರಮಾಧಿಕಾರ ನಡೆಸುತ್ತಿದ್ದ ದಂಡಾಧಿಕಾರಿ. ಕ್ರಿ.ಪೂ. 509ರಲ್ಲಿ ರೋಮಿನಲ್ಲಿ ರಾಜರ ಅಧಿಕಾರ ಕೊನೆಗೊಂಡಾಗ ಸೈನ್ಯಾಧಿಕಾರಿಗಳಿಂದ ಚುನಾಯಿತರಾದ ಕಾನ್ಸಲ್‍ಗಳ ಆಡಳಿತ ಜಾರಿಗೆ ಬಂತು. ಒಂದೊಂದು ಬಾರಿಗೆ ಇಬ್ಬರು ಕಾನ್ಸಲರನ್ನು ಆರಿಸಲಾಗುತ್ತಿತ್ತು. ಅವರ ಅಧಿಕಾರ ಬರುವುದಕ್ಕೆ ಮೊದಲು ಪೆಟ್ರಿಶಿಯನರನ್ನೇ ನೇಮಿಸಲಾಗುತ್ತಿತ್ತು. ಕ್ರಿ.ಪೂ. 367ರಲ್ಲಿ ಜಾರಿಗೆ ಬಂದ ಲಿಸಿನಿಯೊ-ಸೆಕ್ಸ್ಟಿಯನ್ ವಿಧಿಯ ಪ್ರಕಾರ ಒಬ್ಬ ಪೆಟ್ರೆಶಿಯನ್ ಮತ್ತು ಒಬ್ಬ ಪ್ಲೆಬಿಯನರನ್ನು ನೇಮಕ ಮಾಡಬೇಕಾಯಿತು. ಇವರು ಸಾಮಾನ್ಯವಾಗಿ ಸೆನೆಟ್ ಸಭೆಯ ಆದೇಶದಂತೆ ಕಾರ್ಯ ನಿರ್ವಹಿಸುತ್ತಿದ್ದರು. ಸೆನೆಟ್ ಸಭೆಯನ್ನು ಕರೆಯುವ ಹಾಗೂ ವರ್ಜಿಸುವ ಅಧಿಕಾರ ಹೊಂದಿದ್ದರು. ಪ್ರಮುಖ ಆಡಳಿತ ಸೂತ್ರಗಳೆಲ್ಲ ಇವರ ಕೈಯಲ್ಲಿದ್ದವು. ಕಾನ್ಸಲ್ ಆಗಿ ನೇಮಕವಾಗುವವರ ಕನಿಷ್ಠ ವಯೋಮಿತ 40-45. ಒಮ್ಮೆ ಕಾನ್ಸಲ್ ಆಗಿದ್ದವ ಮತ್ತೆ ಕಡೆಯ ಪಕ್ಷ 10 ವರ್ಷಗಳ ವರೆಗಾದರೂ ಕಾನ್ಸಲ್ ಆಗುವಂತಿರಲಿಲ್ಲ. ಮಾಜಿ ಕಾನ್ಸಲರು ಸಾಮಾನ್ಯವಾಗಿ ರಾಜ್ಯಪಾಲರಾಗುತ್ತಿದ್ದರು.

ಇಬ್ಬರು ಕಾನ್ಸಲರಲ್ಲಿ ಯಾವನಾದರೂ ಒಬ್ಬ ತನ್ನ ಅಧಿಕಾರವಧಿಯಲ್ಲಿ ಸತ್ತರೆ, ಅವನ ಉತ್ತರಾಧಿಕಾರಿಯನ್ನು ಚುನಾಯಿಸಲಾಗುತ್ತಿತ್ತು; ಇಬ್ಬರು ಕಾನ್ಸಲರೂ ಸತ್ತಲ್ಲಿ ತಾತ್ಕಾಲಿಕ ಸಮಿತಿಯೊಂದನ್ನು (ಇಂಟರ್‍ರೆಕ್ಸ್) ನೇಮಿಸಲಾಗುತ್ತಿತ್ತು.

 ರೋಮನ್ ಪ್ರಜಾಪ್ರಭುತ್ವದ ಕೊನೆಯ ಕಾಲದಲ್ಲಿ (ಕ್ರಿ.ಪೂ. 133ರ ಅನಂತರ) ಕಾನ್ಸಲ್ ಪದವಿ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಿತು. ಅದರ ಅಧಿಕಾರಾವಧಿಯನ್ನು ಎರಡು ತಿಂಗಳ ವರೆಗೆ ಮೊಟಕುಗೊಳಿಸಲಾಯಿತು. ರೋಮಿನ ಕೊನೆಯ ಕಾನ್ಸಲ್ 536ರಲ್ಲಿ ನೇಮಕವಾದ ; ಕಾನ್‍ಸ್ಟಾಂಟಿನೋಪಲಿನ ಕೊನೆಯ ಕಾನ್ಸಲ್ 541 ರಲ್ಲಿ ನೇಮಕವಾದ.

 ಫ್ರೆಂಚ್ ಪ್ರಜಾಪ್ರಭುತ್ವದಲ್ಲಿ (1799-1804) ಕಾನ್ಸಲರ ಅಧಿಕಾರ ಮತ್ತೆ ಅಸ್ತಿತ್ವಕ್ಕೆ ಬಂದಿತ್ತು. ಆರಿಸಲಾಗಿದ್ದ ಮೂವರು ಕಾನ್ಸಲರಲ್ಲಿ ನೆಪೋಲಿಯನ್ ಪ್ರಥಮ. 1804ರಲ್ಲಿ ನೆಪೋಲಿಯನ್ ಚಕ್ರವರ್ತಿಯಾದಾಗ ಅವನೇ ಸರ್ವಾಧಿಕಾರಿಯಾದನಾಗಿ ಅಲ್ಲಿಗೆ ಈ ಪದ್ಧತಿ ಕೊನೆಗೊಂಡಿತು. ಕಾನ್ಸಲ್ ಶಬ್ದಕ್ಕೆ ರಾಯಭಾರಿ ಅಥವಾ ಪರರಾಜ್ಯ ಪ್ರತಿನಿಧಿ ಎಂಬ ಅರ್ಥವಿದೆ. 

(ನೋಡಿ- ರಾಯಭಾರಿ)             

(ಬಿ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ